ನಮಾಜು ಮಾಡಲು ಅಂಗ ಶುದ್ಧಿ ಹೊಂದಿರುವುದು ಮುಸ್ಲಿಮರಿಗೆ ಕಡ್ಡಾಯ. ಅಂಗ ಶುದ್ಧಿ ಅಂದರೆ ಬೇರೇನಿಲ್ಲ ದೇಹದ ಯಾವುದೇ ಅಂಗದಲ್ಲೂ ಕೊಳೆ, ಗಲೀಜು, ಒಸರುವ ರಕ್ತ,ಬಣ್ಣ ,ನೀರು ದೇಹದ ಮೇಲೆ ಹರಿಯುವುದನ್ನ ತಡೆಯಬಹುದಾದ ವಸ್ತು ಇತ್ಯಾದಿ ಇಲ್ಲದಂತೆ ಪ್ರಥಮವಾಗಿ ಖಾತ್ರಿ ಹೊಂದಿರುವುದು, ನಂತರ ಹಾಗೆ ಶುದ್ಧವಿರುವ ಶರೀರ ಹೊತ್ತವನು ನಮಾಜಿಗೆ ಮುಂಚೆ ಒಮ್ಮೆ ವುಝೂ ಅಥವಾ ablution ಅಥವಾ ಚಿಕ್ಕದಾದ ಶುದ್ಧಿ ಕ್ರಮವನ್ನ ನಿರ್ವಹಿಸುವುದು. ನಮಾಜ್ ಅಂದರೆ ವಿಜಯದೆಡೆಗಿನ ಹಾದಿಯಾಗಿದೆ ಎಂದು ಇಸ್ಲಾಂ ವ್ಯಾಖ್ಯಾನಿಸುತ್ತದೆ. ಇನ್ನೊಂದು ಕಡೆ ನಮಾಜ್ ನಿಮ್ಮನ್ನು ಕೆಡುಕುಗಳಿಂದ, ಕೆಟ್ಟ ಆಲೋಚನೆಗಳಿಂದ ತಡೆಯುತ್ತದೆ ಎಂದೂ ಇಸ್ಲಾಂ ಹೇಳುತ್ತದೆ. ಹೀಗೆ ನಮಾಜ್ ಅನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಸ್ಲಿಮನೊಬ್ಬನಿಗೆ ಕೆಡುಕುಗಳ ವಿರುದ್ಧ ಸೆಟೆದು ನಿಂತ ಪ್ರಜಾಪ್ರಭುತ್ವವನ್ನು ತನ್ನ ಸಮಾಜದಲ್ಲಿ ಅಳವಡಿಸಿಕೊಳ್ಳುವಂತಹದ್ದೇ ಕ್ರಿಯೆ. ಮತ್ತು ಆ ನಮಾಜ್ ಗೂ ಮುಂಚೆ ಅಂಗ ಶುದ್ಧಿ ಹೊಂದಿರುವುದು ಕಡ್ಡಾಯ.

ಕಾಲೇಜುಗಳಲ್ಲಿ ವಿದ್ಯಾರ್ಥಿ ನಾಯಕರಿಗಾಗಿ ಚುನಾವಣೆಗಳು ನಡೆಯುತ್ತವೆ. ಮತ್ತು ಅಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳ ಯುವ ಘಟಕಗಳ ಬೆಂಬಲಿತ ಅಭ್ಯರ್ಥಿಗಳು ಇರುತ್ತಾರೆ‌. ಇನ್ನು ಅಲ್ಲಿಯೂ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಬೆದರಿಕೆ ಹಾಕುವುದೂ, ಹೊರಗಿನ ಗೂಂಡಾಗಳು ಕಾಲೇಜಿನ ಸುತ್ತ ಠಳಾಯಿಸುವುದು ನಾವು ಕಾಲೇಜು ಕಲಿಯುವ ವೇಳೆ ನೋಡಿದ್ದೆವು. ಹಾಗೆಯೇ ಅಲ್ಲಿಯೂ ವಿಜಯೋತ್ಸವ ಪಾರ್ಟಿಗಳಿರುತ್ತವೆ. ಆ ಊರಿನಲ್ಲಿರಬಹುದಾದ ತಕ್ಕ ಮಟ್ಟಿನ ದೊಡ್ಡ ಹೊಟೇಲ್ ನಲ್ಲಿ ಗಡದ್ದು ಊಟದ ವ್ಯವಸ್ಥೆ ,ಕೇಸುಗಟ್ಟಲೆ ಬಿಯರ್, ಸಿಗರೇಟುಗಳೆಲ್ಲವೂ ಧಾರಾಳವಾಗಿ ಗೆದ್ದ ಅಭ್ಯರ್ಥಿ ಹಂಚುವುದಿದೆ. ಹೀಗೆ ಗೆದ್ದ ಅಭ್ಯರ್ಥಿಗಳನ್ನೆಲ್ಲ ಮುಂದೆ ನೀವು ಯಾವುದಾದರೂ ರಾಜಕೀಯ ಪಕ್ಷದ ಯುವ ಘಟಕದ ಅಧ್ಯಕ್ಷನಾಗಿ ಕಾರ್ಯದರ್ಶಿಗಳಾಗಿಯೆಲ್ಲ ನೋಡಬಹುದು. ಅವನ ಸುತ್ತ ಜೈಕಾರ ಹಾಕುವ ಕೆಲವು ತಿರುಬೋಕಿಗಳ ದಂಡು ನೆರೆಯುತ್ತದೆ. ಅವರ ಆಟಾಟೋಪಗಳಿಗೆ ಬೆಂಗಾವಲಾಗಿ ಅವನ ಪಕ್ಷದ ದೊಡ್ಡವರ ಕೊಂಡಾಟಗಳೂ ಇದ್ದೇ ಇರುತ್ತದೆ.ಹೀಗೆ ಬೇರೆ ಬೇರೆ ಸ್ಥರಗಳಲ್ಲಿ ಪಟ್ಟಿಂಗತನ ಮಾಡುತ್ತಾ ಬೆಳೆದು ಬರುವುದು ಸಾಧಾರಣವಾಗಿ ವಿಧಾನಸಭೆ ಲೋಕಸಭೆ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳಿಗಿರಬೇಕಾದ ಹುಟ್ಟು ಗುಣ. ಇನ್ನೂ ಕೆಲವು ಬೆರಕೆ ವೆರೈಟಿಗಳೆಂದರೆ ಆ ಏರಿಯಾದ ಸ್ವಲ್ಪ ಕಾಸಿರುವ ಕುಳ. ಅವನನ್ನು ದುಂಬಾಲು ಬಿದ್ದು ಪಕ್ಷಕ್ಕೆಳೆದು ಬಂದ ನಂತರ ಅವನು ಮಾಡುವ ದೋ ನಂಬರ್ ದಂದೆಗಳೆಲ್ಲ ಅಧಿಕೃತವಾಗುವುದು ನೋಡುವುದೇ ಇನ್ನೊಂದು ತರಹದ ಮಜಾ. ನಂತರ ಸ್ವಲ್ಪ ಧಾರ್ಮಿಕ ಹಿಡಿತ ಇರುವವನು, ಇನ್ನೊಂದು ಸ್ವಲ್ಪ ತೋಳು ಏರಿಸುವ ಪಟ್ಟಿಂಗರನ್ನೂ ತಂದು ಕೂಡಿಸಿಕೊಂಡರೆ ಒಂದು ರಾಜ್ಯವ್ಯಾಪಿ ರಾಷ್ಟ್ರವ್ಯಾಪಿ ಪಕ್ಷಗಳನ್ನು ಕಟ್ಟುವುದು ಬಹಳಷ್ಟಾಯಿತು. ಅಂತಹ ಪಕ್ಷಗಳಲ್ಲೆಲ್ಲ ಕಾಣಸಿಗುವ ಕೆಲವೊಂದು ನಿಜಕ್ಕೂ ಪ್ರಾಮಾಣಿಕ ವ್ಯಕ್ತಿಗಳು ಅತ್ತ ಅಧಿಕಾರವೆಂಬ ಅಮೃತವನ್ನು ನುಂಗುವುದೋ ಉಗುಳುವುದೋ ಅಂತ ತಬ್ಬಿಬ್ಬುಗೊಂಡು ಕಡೆಗೆ ನುಂಗುವುದನ್ನೇ ಆಯ್ಕೆ ಮಾಡಿಕೊಂಡು ಎಲ್ಲರೊಳಗೊಂದಾಗುವುದೂ ಇಂಡಿಯನ್ ಪಾಲಿಟಿಕ್ಸ್ ನ ನಿಗೂಢ ಅಚ್ಚರಿ.

ಅದು ಹೇಗೆಲ್ಲಾ ತಿಪ್ಪರಲಾಗ ಹಾಕಿದರೂ ಹೀಗಿರುವ ಜನರ ದಂಡೇ ಶಾಸನಸಭೆಗಳಲ್ಲಿ ಕೂರುವ ವಿಪರ್ಯಾಸದಲ್ಲಿ ಭಾರತೀಯ ಮತದಾರ ದಡ್ಡನೇನೆಂದಲ್ಲ. ಆತ ಹೇಗೇಗೋ ಹೆಣಗಾಡಿ ರಾಜಕಾರಣಿಗಳಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾ ದೇಶವನ್ನೊಂದು ಸುಸ್ಥಿರ ಪ್ರಜಾಪ್ರಭುತ್ವವಾಗಿ ಇಡಲು ಕಸರತ್ತು ನಡೆಸುತ್ತಲೇ ಇರುತ್ತಾನೆ. ಅದಕ್ಕಾಗಿ ಆತ ಎಷ್ಟು ರಿಸ್ಕ್ ತೆಗೆದುಕೊಳ್ಳುತ್ತಾನೆ ಅಂದರೆ, ಬ್ರಿಟಿಷರು ಹಿಂಡಿ ಹಿಪ್ಪೆ ಮಾಡಿ ಬಿಟ್ಟು ಹೋದ ಭಾರತದಲ್ಲಿ ಸಾವಿರಾರು ಶಾಲೆ ಕಾಲೇಜು, ಲಕ್ಷಾಂತರ ಕಿಮೀ ರಸ್ತೆ ,ಉಳುವವನೇ ಹೊಲದೊಡೆಯ,ಬ್ಯಾಂಕ್ ಗಳ ರಾಷ್ಟ್ರೀಕರಣ,ಕೈಗಾರಿಕೆಗಳು, ಜಗತ್ತಿನ ಎರಡನೇ ಅತಿ ದೊಡ್ಡ ಜನಸಂಖ್ಯೆ ಇರುವ ದೇಶದಲ್ಲೂ ಜಿಡಿಪಿಯನ್ನು 5.7 ರ ತನಕ ಎಳೆದು ತರುವುದನ್ನೆಲ್ಲ ಮಾಡಿದ್ದ ಕಾಂಗ್ರೆಸ್ ಗೆ ಅಧಿಕಾರದ ಅಮಲೇರಿ ಜಡ್ಡುಗಟ್ಟತೊಡಗಿದಾಗ ಕನಿಷ್ಟ ಕಾಮನ್ ಸೆನ್ಸ್ ಇಲ್ಲದ ವ್ಯಕ್ತಿಯನ್ನು ಪ್ರಧಾನ ಮಂತ್ರಿ ಸ್ಥಾನದಲ್ಲಿ ಕುಳ್ಳಿರಿಸಿ ಏನಾದರೂ ಜಾದೂ ನಡೆಯಲಿ ಅಂತಲೂ ಕಳೆದ ಲೋಕಸಭಾ ಚುನಾವಣೆಯ ವೇಳೆಯಲ್ಲಿ ಅಪೇಕ್ಷಿಸಿದ್ದ. ಆದರೆ ಪ್ರಜಾಪ್ರಭುತ್ವ ಸಂಪೂರ್ಣವಾಗಿ ದೇಶದ ಮತದಾರನ ಕೈಯೊಳಗೆ ಸುರಕ್ಷಿತವಾಗದೆ ನಿತ್ಯ ಗೋಳು ಹೊಯ್ದುಕೊಳ್ಳುತ್ತಾ ಕಬ್ಬಿಣದ ಕಡಲೆಯಾಗುವಾಗಲೆಲ್ಲ ಚುನಾವಣೆಗಳು ಮತದಾರನ ಕೈಗೆ ಮತ್ತೊಂದು ಮೌಕಾ ಕೊಡುತ್ತದೆಯಾದರೂ, ಚುನಾವಣೆಗೆ ಮುನ್ನ ಬಳ್ಳಾರಿ ವರೆಗೆ ಗಣಿ ರೆಡ್ಡಿಗಳ ಸೊಲ್ಲಡಗಿಸುವ ಪಾದಯಾತ್ರೆ ಮಾಡಿದ ಪಕ್ಷದವರು ಖೇಣಿಯೆಂಬ ರೈತರ ಭೂಮಿಯನ್ನು ಸರಕಾರದ ಜೊತೆಗೂಡಿ ಜುಜುಬಿ ಬೆಲೆಗೆ ಕಿತ್ತುಕೊಂಡ ಅಶೋಖ್ ಖೇಣಿಗೆ ಟಿಕೆಟ್ ಮಂಜೂರು ಮಾಡುವುದು, ವೋಟು ಹಾಕಲು ಹೋಗುವಾಗ ನಿರ್ಭಯಾಳನ್ನು ಮರೆಯದಿರಿ ಎಂದ ಮಾತಿನ ಮಲ್ಲನೊಬ್ಬ ಅಧಿಕಾರ ಸಿಕ್ಕ ನಂತರ ನಿರ್ಭಯಾಳ ಮತ್ತಷ್ಟು ತಂಗಿಯಂದಿರು ಕಿಬ್ಬೊಟ್ಟೆ ಸಿಗಿಸಿಕೊಂಡು ಮುದುಡುವಾಗ ರೇಪ್ ರೇಪಷ್ಟೇ ರಾಜಕೀಯ ಮಾಡಬೇಡಿ ಎಂದು ಹೇಳುವುದನ್ನೂ, ಜಾತ್ಯಾತೀತ ಅಂತ ಪಕ್ಷದ ಹೆಸರಿನೊಂದಿಗೇ ಸೇರಿಕೊಂಡಿರುವ ಪಕ್ಷದ ಮರಿ ಕಿಂಗ್ ಮೇಕರ್ ರೇಪಿಸ್ಟ್ ಗಳ ಪರವಾಗಿ ರ್ಯಾಲಿ ಹೊರಟ ಪಕ್ಷದವರ ಜೊತೆ ನಿಂತು ನಾವೇನಾದರೂ ಕೆಮ್ಮಿದರೆ ಕರ್ನಾಟಕವೇ ಧೂಳೀಪಟ ಎಂದು ಹೇಳುವುದನ್ನೆಲ್ಲ ಹೇಗೆ ತಡೆಯುವುದು ಎಂದು ಯೋಚಿಸಿ ತಲೆ ಕೆಟ್ಟಾಗಲೆಲ್ಲ ಆತನೊಳಗೆ ನನ್ನ ವೋಟ್ ಯಾರಿಗೆ ಎಂಬ ಗೊಂದಲ ಶುರುವಿಟ್ಟುಕೊಳ್ಳುತ್ತದೆ. ಹಾಗಂತ ಎಲ್ಲರೂ ಬರಗೆಟ್ಟ ಬಿಕ್ನಾಸಿಗಳು ಅಂತ ಓಟು ಹಾಕದಿರಲಾಗುತ್ತದೆಯೇ? ಪ್ರಜಾಪ್ರಭುತ್ವವನ್ನು ಸುಸ್ಥಿರವಾಗಿಡುವುದು ನಮಾಜ್ ನಷ್ಟೇ ಕಡ್ಡಾಯ ಕರ್ಮ ನೋಡಿ.

ತಮಾಷೆ ಅಂದರೆ ನಾನು ಕಾಂಗ್ರೆಸ್‌ ಬಿಜೆಪಿ ಜನತಾದಳಗಳನ್ನು ಹೆಸರಿಸುವಾಗ ಇನ್ನೊಂದು ಪಕ್ಷವನ್ನು ಹೆಸರಿಸದೆ ಹೋದರೆ ನಮಾಜು ಮಾಡುವವನು ಎಸ್‌ಡಿಪಿಐ ಗೆ ಓಟು ಹಾಕಬೇಕು ಎಂದು ಕೆಲವು ಉದಾರ ಸಲಹೆಗಳೂ ಬರಬಹುದು. ಪ್ರಜಾಪ್ರಭುತ್ವ ದೇಶದಲ್ಲಿ ಯಾರೊಂದಿಗೆ ಹೇಗೆ ಮಾತನಾಡಬೇಕು ಎಂದು ಗೊತ್ತಿಲ್ಲದ ಕಾರ್ಯಕರ್ತರ ದಂಡು ಹೊತ್ತುಕೊಂಡ ಆ ಪಕ್ಷದ ನಾಯಕರು ಯಾವ ಪಾಪ ಮಾಡಿದ್ದರೋ ಏನೋ. ಧರ್ಮ ನಿರಪೇಕ್ಷಿತ ಮೌಲ್ಯಾಧಾರಿತ ರಾಜಕೀಯದ ಕನಸನ್ನು ಆ ಪಕ್ಷದ ನಾಯಕರು ಕಂಡಿದ್ದರೂ ಅದರ “ವೀರಶೂರ” ಕಾರ್ಯಕರ್ತರಿಗೆ ತಲುಪಿಸಲು ಅವರಿಗೆ ಇನ್ನೂ ಶತಮಾನಗಳು ಬೇಕಾಗಬಹುದು. ತಲುಪಿಸದೇ ಹೋದರೆ ಅದು ಇನ್ನೊಂದು ಬಿಜೆಪಿಯಾದರೂ ಅಚ್ಚರಿಯೇನೂ ಇಲ್ಲ ಬಿಡಿ. ಹಾಗಂತ ಅವರ ಬಗ್ಗೆ ಏನಾದರೂ ಹೇಳುವ ನೈತಿಕತೆ ನನಗೆ ಇದೆ ಎಂದಲ್ಲ. ಕಡೆಯ ಪಕ್ಷ ಕಾನೂನಾತ್ಮಕ ಮಾರ್ಗದಲ್ಲಿ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಗೊತ್ತಿಲ್ಲದ ಮುಸ್ಲಿಮರನ್ನು ಜಿಲ್ಲಾಧಿಕಾರಿ ಕಛೇರಿಗಳ ಮುಂದೆ ಸಾಲು ನಿಲ್ಲಿಸುವ ಕೆಲಸವನ್ನಾದರೂ ಅವರು ಮಾಡಿದ್ದಾರೆ ಇರಲಿ.

ಈಗ ಶುದ್ಧಿ ಮಾಡಲು ನೀರಿಲ್ಲ, ಅಥವಾ ದೇಹದಿಂದ ಗಾಯವಾಗಿ ರಕ್ತ ಒಸರುತ್ತಿದೆ ನೀರು ತಾಗಿಸುವಂತಿಲ್ಲ ಅಂದ ತಕ್ಷಣ ನಮಾಜ್ ಗೆ ವಿರಾಮವಿಲ್ಲ. ಶುದ್ಧ ಹುಡಿ ಮಣ್ಣಿನ ಮೂಲಕ ತಯಮ್ಮುಮ್ ಮಾಡಿ ನಮಾಜಿನ ಸಮಯವಾದಾಗ ನಮಾಜ್ ಮಾಡಲೇಬೇಕು. ಇನ್ನು ನಮಾಜ್ ಗೆ ನಿಲ್ಲಬೇಕಾದ ಸ್ಥಳವೇ ಗಲೀಜಾಗಿದೆ. ಎಲದಲಿ ನೋಡಿದರೂ ಶುದ್ಧತೆ ಸಾಧ್ಯವಿಲ್ಲ ನಮಾಜ್ ನ ಸಮಯ ಮೀರುತ್ತಿದೆ ಅಂದರೆ ಅದೇ ಸ್ಥಿತಿಯಲ್ಲಿ ನಮಾಜ್ ನಿರ್ವಹಿಸಬಹುದು. ನಂತರ ಉತ್ತಮ ವ್ಯವಸ್ಥೆ ಇರುವ ಜಾಗಕ್ಕೆ ತಲುಪಿದ ನಂತರ ಮತ್ತೊಮ್ಮೆ ನಿರ್ವಹಿಸಿದರಾಯಿತಷ್ಟೇ. ಚುನಾವಣೆಯೂ ಅಷ್ಟೇ, ಅಭ್ಯರ್ಥಿಗಳೆಲ್ಲ ಗಟಾರ್ ಅಂತ ಬೇಸರಿಸಬೇಕಿಲ್ಲ. ಪ್ರಜಾಪ್ರಭುತ್ವವನ್ನು ಸುಸ್ಥಿರವಾಗಿಡುವುದು ನಮ್ಮೆಲ್ಲರ ಕಡ್ಡಾಯ ಕರ್ಮ. ನಮ್ಮ ಮಕ್ಕಳ ಪಾಲಿನ ಆಸ್ತಿಯದು.ಆಮಿಷ, ಜಾತಿ,ಧರ್ಮ,ಗುಂಪುಗಳಿಗೆ ಬಲಿಯಾಗದೆ ಭಾರತದ ಮೌಲ್ಯಗಳಿಗೆ ಕನಿಷ್ಠ ಹೊಂದಾಣಿಕೆಯಾಗುವ ಅಭ್ಯರ್ಥಿಗಳಿಗೆ ಆತ್ಮಸಾಕ್ಷಿಗಣುಗುಣವಾಗಿ ಓಟ್ ಮಾಡಿ. ಯಾವ ಹೆಣ್ಣು ಮಗು ಕೂಗಿದರೂ ವಿಧಾನಸೌದಕ್ಕೆ ಕೇಳಿಸುವ ಸ್ವಚ್ಛ ಪ್ರಜಾಪ್ರಭುತ್ವವನ್ನು ನಮ್ಮ ಮುಂದಿನ ಪೀಳಿಗೆಯಾದರೂ ಕಟ್ಟಿಯೇ ಕಟ್ಟಬಹುದು ಎಂದು ಭರವಸೆಯಿಡೋಣ. 🙂

#IVoteToRespectDemocracy

Leave a Reply