ಡಾ| ಪ್ರವೀಣ್ ರಾಜ್ ಪಿ.

ಒಂದು ದಿನ 65 ವರ್ಷದ ಹಿರಿಯ ನಾಗರಿಕರು ಕ್ಲಿನಿಕ್‍ಗೆ ಬಂದಿದ್ದರು. ಬಾಯೊಳಗೆ ಒಂದು ಹುಣ್ಣು. ಪರೀಕ್ಷಿಸಿ ನೋಡಿದಾಗ ಅರ್ಬುದ ರೋಗ ಲಕ್ಷಣದಂತೆ ಕಂಡುಬಂತು. ತಡಮಾಡದೆ ವಿವರ ಗಳನ್ನು ಬರೆದು ತಜ್ಞ ವೈದ್ಯರಲ್ಲಿಗೆ ಕಳುಹಿಸಿಕೊಟ್ಟೆ. ಆ ಮೇಲೆ ಅದರ ಬಗ್ಗೆ ಮರೆತು ಬಿಟ್ಟೆ. ಸುಮಾರು 10 ತಿಂಗಳು ಕಳೆದಿರಬಹುದು. ಒಂದು ದಿನ ಬೊಚ್ಚು ಬಾಯಿಯ ವೃದ್ಧರು ಬಂದು ಕೈ ಮುಗಿದು ನಿಂತರು. ಏನೆಂದು ಕೇಳಬೇಕೆನ್ನುವಷ್ಟರಲ್ಲಿ ಅವರಿಂದ ಮಾತೊಂದು ಹೊಸ ಸತ್ಯವನ್ನು ತೋರಿಸಿಕೊಟ್ಟಿತು.

“ತುಂಬಾ ಧನ್ಯವಾದಗಳು ಡಾಕ್ಟ್ರೆ. ನೀವು ಸರಿಯಾದ ಸಮಯಕ್ಕೆ ನನ್ನನ್ನು ಕಳುಹಿಸದೇ ಇದ್ದಲ್ಲಿ ನಾನು ಉಳಿಯುತ್ತಿರಲಿಲ್ಲ. ಅದು ಕ್ಯಾನ್ಸರ್ ಆಗಿತ್ತು. ಹಲ್ಲೆಲ್ಲ ತೆಗೆದು ರೇಡಿಯೇಷನ್ ಕೊಟ್ಟರು. “ಈಗ ಗುಣ ವಾಗಿದೆ” ಎಂದರು. “ಅದನ್ನು ಹೇಳುವುದಕ್ಕಾಗಿಯೇ ಇಲ್ಲಿವರೆಗೆ ಬಂದೆ” ಎಂದೂ ಸೇರಿಸಿದರು.
ವೈದ್ಯ ಬರೀ ಔಷಧಿ ಕೊಡುವ ವ್ಯಕ್ತಿಯಲ್ಲ, ಬದಲು ‘ಸರಿಯಾದ ಸಮಯಕ್ಕೆ, ಸರಿಯಾದ ತಜ್ಞ’ರಲ್ಲಿಗೆ ಕಳುಹಿಸಿ ಕೊಡುವುದೂ ವೈದ್ಯರ ಕರ್ತವ್ಯ. ಈ ಸತ್ಯ ನನಗೆ ಅರಿವಾದುದು ಆ ದಿನ.
ರೋಗದ ಬಗೆಗೆ ಇಂದು ‘ಮಾಹಿತಿಯ ಸ್ಫೋಟ’ವೇ ಆಗುತ್ತದೆ. ಎಷ್ಟು ವೈದ್ಯರಿಗೆ ತಿಳಿದಿದೆಯೋ ಅಷ್ಟೇ ಜನಸಾಮಾನ್ಯನಿಗೆ ಸಿಗುವ ಎಲ್ಲಾ ಅವಕಾಶಗಳೂ ಇಂದು ಇವೆ. ಇಂದಿನ ಎಲ್ಲಾ ಮಾಧ್ಯಮಗಳೂ ‘ಆರೋಗ್ಯ ಮಾಹಿತಿ’ಗಾಗಿ ಪ್ರತ್ಯೇಕ ಪುಟವನ್ನು, ಸಮಯವನ್ನು ವಿೂಸಲಿಟ್ಟಿವೆ.

ಆದರೆ ನಿಜಕ್ಕೂ ಸಿಗಬೇಕಾದ ಮಾಹಿತಿ ಸಿಗುತ್ತಿದೆಯೇ? ವೈದ್ಯರು ಹೇಳಿದ್ದು ಜನ ರಿಗೆ ಅರ್ಥವಾಗುತ್ತಿದೆಯೇ? ಬರೆದದ್ದು ಮನದಟ್ಟಾಗುತ್ತಿದೆಯೇ? ಇಂದಿಗೂ ಯಾವ ರೋಗಕ್ಕೆ, ಯಾವ ವೈದ್ಯನಲ್ಲಿಗೆ ಹೋಗಬೇಕೆಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಯಾವ ವೈದ್ಯ ಪದ್ಧತಿ, ಯಾವೆಲ್ಲ ರೋಗಕ್ಕೆ ಎಂಬುದರ ಅರಿವಿಲ್ಲ. ಇಂದಿಗೂ ನಾವು ವೈದ್ಯರನ್ನು ಅಥವಾ ಒಂದು ವೈದ್ಯ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳುವುದು ಇನ್ನೊಬ್ಬರ ಸಲಹೆಯ ಮೇರೆಗೆ. ವಿಪರ್ಯಾಸವೆಂದರೆ ಆ ‘ಇನ್ನೊಬ್ಬ’ ತನ್ನಷ್ಟೇ ತಿಳಿದವನಾಗಿರುತ್ತಾನೆ. ನುರಿತ ವ್ಯಕ್ತಿಯಲ್ಲಿ ಅಥವಾ ವ್ಯವಸ್ಥೆ ಯಲ್ಲಿ ವಿಚಾರಿಸಿ ಚಿಕಿತ್ಸೆಗೆ ಹೋಗುವ ಯಾವುದೇ ಗಂಭೀರ ಪ್ರಯತ್ನಗಳು ಹೆಚ್ಚಿನ ಜನರಲ್ಲಿ ಇನ್ನೂ ಇಲ್ಲ! ಇಂತಹ ಅಭ್ಯಾಸಗಳು ಒಳಿತಿಗಿಂತಲೂ ಕೆಡುಕನ್ನೇ ಉಂಟು ಮಾಡುತ್ತದೆ. ಸೂಕ್ತ ವೈದ್ಯ ಅಥವಾ ವೈದ್ಯ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳದಿದ್ದಲ್ಲಿ ಅಮೂಲ್ಯ ಸಮಯ ಮತ್ತು ಹಣ ಎರಡೂ ವ್ಯರ್ಥವಾಗ ಬಹುದು. ಕೆಲವೊಮ್ಮೆ ಪ್ರಾಣಕ್ಕೂ ತೊಂದರೆಯಾಗಬಹುದು.

ಕೆಲವು ಸಲ ವೈದ್ಯನೂ ಇಂತಹ ಅಸ್ಪಷ್ಟತೆಗೆ ಕಾರಣನಾಗುತ್ತಾನೆ. ಸೂಕ್ತ ಔಷಧಿ, ರೋಗದ ಬಗೆಗೆ ಸ್ವಲ್ಪ ಮಟ್ಟಿನ ಅರಿವು ವೈದ್ಯ ನೀಡಬೇಕಾಗುತ್ತದೆ. ತನ್ನಿಂದಾಗದ ಚಿಕಿತ್ಸೆಗೆ ಬೇರೆ ಸೂಕ್ತ ವೈದ್ಯರನ್ನು ಸೂಚಿಸುವುದೂ ವೈದ್ಯನ ಕರ್ತವ್ಯವಾಗಿರುತ್ತದೆ. ಇದನ್ನು ಸಮರ್ಪಕ ವಾಗಿ ಮಾಡುವವರು ಸಣ್ಣಪೇಟೆ ಮತ್ತು ಹಳ್ಳಿಗಳ ವೈದ್ಯರು. ಆದ್ದರಿಂದ ಅವರು ‘ಕುಟುಂಬ ವೈದ್ಯ’ರಂತೆ ಇರುತ್ತಾರೆ. ಆದರೆ ಸ್ಪೆಶಲಿಸ್ಟ್‍ಗಳು ಇರುವ ಪೇಟೆಗಳಲ್ಲಿ, ನಗರ ಗಳಲ್ಲಿ ರೋಗಿಗೂ-ವೈದ್ಯನಿಗೂ ಸಂಬಂಧ ಬೆಳೆಯುವುದಿಲ್ಲ. ಅಲ್ಲಿ ಬರಿಯ ಕೊಡು-ಕೊಳ್ಳುವಿಕೆ ಮಾತ್ರ ಇರುತ್ತದೆ. ಇದು ವೈದ್ಯಕೀಯ ರಂಗದ ವೈಫಲ್ಯ. ವೈದ್ಯ ಕೀಯದ ನಿಜವಾದ ಆಶಯವೇ ರೋಗಿ ಯೊಬ್ಬನಿಗೆ ಅತ್ಯುತ್ತಮ ಚಿಕಿತ್ಸೆ ಲಭ್ಯವಾಗು ವಂತೆ ನೋಡುವುದು.

ಇಂದು ವೈದ್ಯರಂಗದಲ್ಲಿ ಹಲವು ವೈದ್ಯ ಪದ್ಧತಿಗಳಿವೆ. ಇವ್ಯಾವುದೂ ತನ್ನಿಂತಾನೇ ಹುಟ್ಟಿಕೊಳ್ಳಲಿಲ್ಲ. ಮಾನವನ ಅಗತ್ಯಗಳಿಗನುಗುಣವಾಗಿ ನಡೆಯುವ ಸತತ ಅನ್ವೇಷಣೆಗಳ ಫಲವೇ ಈ ವೈದ್ಯ ಪದ್ಧತಿಗಳು. ಒಂದೊಂದಕ್ಕೂ ಅದರದ್ದೇ ಆದ ವಿಶೇಷತೆಗಳುಂಟು. ಒಂದು ಪದ್ಧತಿ ಗುಣಪಡಿಸಲಾರದ್ದನ್ನು ಇನ್ನೊಂದರಲ್ಲಿ ಮಾಡಬಹುದು. ಇದರ ಬಗ್ಗೆ ಸರಿಯಾದ ಮಾಹಿತಿ ವೈದ್ಯರಲ್ಲೂ ಇಲ್ಲದಿರುವುದು ವಿಪರ್ಯಾಸ ಮತ್ತು ವಿಷಾದನೀಯ. ತಮ್ಮ ಕಲಿಕಾ ಅವಧಿಯಲ್ಲಿ ಅಲೋಪತಿ, ಹೋಮಿಯೋ ಪತಿ, ಆಯುರ್ವೇದ ಪದ್ಧತಿಗಳಲ್ಲಿ ಕಲಿಯುವಾಗ, ಇತರ ಪದ್ಧತಿಗಳ ಬಗ್ಗೆ ಸೂಕ್ತ ವಿವರಗಳನ್ನು ಒದಗಿಸುವುದು ಹಿಂದೆಂದಿಗಿಂತಲೂ ಇಂದು ಅಗತ್ಯವೆನಿಸಿದೆ. ಇದು ರೋಗಿ ಗಳಿಗೆ ಮತ್ತು ಸಮುದಾಯಕ್ಕೆ ಬಹಳ ಒಳಿತನ್ನು ಉಂಟು ಮಾಡಬಹುದು. ಹಾಗಾದಲ್ಲಿ ವೈದ್ಯಕೀಯ ಸೇವೆ ಅರ್ಥ ಪೂರ್ಣವಾಗುತ್ತದೆ. ರೋಗ ಪರಿಹಾರ ದತ್ತ, ರೋಗಿಗೆ ಸಮಾಧಾನ ನೀಡುವತ್ತ ವೈದ್ಯರಂಗ ನಿಜವಾದ ಆಸ್ಥೆ ತೋರಿಸಿ ದಂತಾಗುತ್ತದೆ.

Leave a Reply