ಮುಂಬೈ: 2008 ರಲ್ಲಿ ನಡೆದ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಸೇನೆಯ ಇಂಟಲಿಜೆನ್ಸ್ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್‍ಗೆ ಸುಪ್ರೀಂಕೋರ್ಟು ಮತ್ತು ಮುಂಬೈ ಹೈಕೋರ್ಟಿನಲ್ಲಿ ಹಿನ್ನಡೆಯಾಗಿದ್ದು, ಸ್ಫೋಟ ಪ್ರಕರಣದಲ್ಲಿ ಕಾನೂನು ಬಾಹಿರವಾಗಿ ಕಸ್ಟಡಿಗೆ ಪಡೆದು ಹಿಂಸಿಸಿದ್ದಕ್ಕಾಗಿ ವಿಶೇಷ ತನಿಖಾ ದಳದ ಮೂಲಕ ತನಿಖೆ ನಡೆಸಬೇಕೆನ್ನುವ ಪುರೋಹಿತ್ ಅರ್ಜಿಯಲ್ಲಿ ಮದ್ಯಪ್ರವೇಶಿಸಿಲು ಸುಪ್ರೀಂಕೋರ್ಟು ನಿರಾಕರಿಸಿದೆ.

ಜಸ್ಟಿಸ್ ರಂಜನ್ ಗೊಗೊಯಿ, ನವೀನ್ ಸಿನ್ಹಾ, ಕೆಎಂ ಜೋಸೆಫ್‍ರ ಸುಪ್ರೀಂಕೋರ್ಟಿನ ಪೀಠ ಮಂಗಳವಾರ ಪುರೋಹಿತ್‍ರ ಅರ್ಜಿಯನ್ನು ತಳ್ಳಿಹಾಕಿದೆ. ಸುಪ್ರೀಂಕೋರ್ಟಿನ ಮಧ್ಯಪ್ರವೇಶ ಕೆಳಕೋರ್ಟಿನಲ್ಲಿ ಪ್ರಗತಿಯಲ್ಲಿರುವ ಕ್ರಮಗಳಿಗೆ ಅಡ್ಡಿಯಾಗಬಹುದು ಎಂದು ಹೇಳಿ ಪೀಠ ಪುರೋಹಿತರ ಅರ್ಜಿಯನ್ನು ಕೋರ್ಟು ಪುರಸ್ಕರಿಸಲಿಲ್ಲ.

ಸುಪ್ರೀಂಕೋರ್ಟಿನ ತೀರ್ಪಿನ ಬೆನ್ನಿಗೆ ಮುಂಬೈ ಹೈಕೋರ್ಟಿನ ತೀರ್ಪು ಬಂದಿದ್ದು, ತನ್ನ ವಿರುದ್ಧ ಯುಎಪಿಎ ಹೊರಿಸುವುದನ್ನು ಪ್ರಶ್ನಿಸುವ ಅರ್ಜಿಯಲ್ಲಿ ತೀರ್ಮಾನ ಆಗುವವರೆಗೆ ವಿಚಾರಣಾ ಕೋರ್ಟಿನಲ್ಲಿ ಆರೋಪ ಹೊರಿಸುವುದನ್ನು ತಡೆಯಬೇಕೆಂದು ಪುರೋಹಿತ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಕೆಳಕೋರ್ಟು ಆರೋಪ ಹೊರಿಸದಂತೆ ಸ್ಟೇ ನೀಡಲು ಹೈಕೋರ್ಟು ನಿರಾಕರಿಸಿ ತೀರ್ಪು ನೀಡಿದೆ. ಈ ರೀತಿ ಪುರೋಹಿತ್‍ಗೆ ಎರಡು ಕೋರ್ಟಿನಲ್ಲಿಯೂ ಹಿನ್ನಡೆಯಾಗಿದೆ.

ಬುಧವಾರ 2008ರ ಮಾಲೆಗಾಂವ್ ಸ್ಫೋಟದ ಆರೋಪ ಹೊರಿಸುವ ಕಾರ್ಯವನ್ನು ವಿಶೇಷ ಎನ್‍ಐಎ ಕೋರ್ಟು ಆರಂಭಿಸಿದೆ. ಇದೇ ವೇಳೆ ಪುರೋಹಿತ್ ವಿರುದ್ಧ ಎರಡು ತೀರ್ಪುಗಳು ಬಂದಿವೆ. ಆರೋಪ ಹೊರಿಸುವುದಂತೆ ಕಳೆದ ತಿಂಗಳು 29ಕ್ಕೆ ಪುರೋಹಿತ್ ಎನ್‍ಐಎ ಕೋರ್ಟಿನಲ್ಲಿ ಮನವಿ ಮಾಡಿದ್ದರು.

Leave a Reply