ಶ್ರೀಮಂತರ ರೋಗ ಎಂದು ಕರೆಯಲ್ಪಡುತ್ತಿದ್ದ ಮಧುಮೇಹವು ಈಗ ಮಕ್ಕಳಿಂದ ವೃದ್ಧರವರೆಗೂ ತನ್ನ ಕಬಂಧಬಾಹುವನ್ನು ಚಾಚಿದೆ. ಇದು ಒಮ್ಮೆ ಮೈಗಂಟಿಕೊಂಡರೆ ಸಾಕು. ನಮ್ಮ ಪ್ರೀತಿಯ ಸಿಹಿತಿನಿಸುಗಳನ್ನು ತಿನ್ನುವುದು ಕನಸೇ ಸರಿ. ಜಿಲೇಬಿ, ಪೇಡ, ಚಾಕ್ಲೇಟ್, ಐಸ್‍ಕ್ರೀಮ್… ಛೇ ಒಂದೇ ಎರಡೇ. ಎಲ್ಲದರಿಂದಲೂ ದೂರುವಿರುವುದು ನಮ್ಮ ಕರ್ಮವಾಗಿ ಬಿಡುತ್ತದೆ. ದಿನಂಪ್ರತಿ ಹತ್ತಾರು ಚಾಕಲೇಟು ಮೆಲ್ಲುತ್ತಿದ್ದ ಗೆಳತಿಗೆ ಸಕ್ಕರೆ ಕಾಯಿಲೆ ಬಂದಾಗ ಸಂಕಟವಾಯಿತು. ತಾನು ಈಗ ವೈದ್ಯರ ಸಲಹೆಯಂತೆ ಸಿಹಿ ರುಚಿಯಿಂದ ದೂರ, ಆರೋಗ್ಯ ಮುಖ್ಯ ತಾನೇ, ಸಪ್ಪೆ ಟೀ ಕುಡಿದು ಸಾಕಾಯ್ತು ಎಂದಳು.

ಮಧುಮೇಹವು ಇಂದು ಪುರುಷರಿಗಿಂತ ಮಹಿಳೆಯರಲ್ಲಿ ಅಧಿಕವಾಗುತ್ತಿದೆ. ಮಾನವ ಸಂತಾನೋತ್ಪತ್ತಿಯಲ್ಲಿ ಪ್ರಮುಖ ಪಾತ್ರ ವಹಿಸುವವಳು ಮಹಿಳೆ ಎಂಬ ನಿಟ್ಟಿನಲ್ಲಿ ಈ ಲೇಖನವು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತದೆ. 21ನೇ ಶತನಮಾನವು ವಾರ್ಧಕ್ಯದ ಶತಮಾನವೆಂದು ವಿಶ್ಲೇಷಿಸಲಾಗುತ್ತಿದೆ. ಕಾರಣವೇನೆಂದರೆ ಈ ಶತಮಾನದಲ್ಲಿ ಐದು ಜನರಲ್ಲಿ ಒಬ್ಬರು 60 ವಯಸ್ಸು ದಾಟಿದವರಾಗಿರುತ್ತಾರೆ. 15 ವರ್ಷದ ಕೆಳಗಿನ ಮಕ್ಕಳಿಗಿಂತ, ಇಂಥವರ ಸಂಖ್ಯೆಯೇ ಹೆಚ್ಚು ಎಂಬುದು ಈ ಶತಮಾನದ ವಿಶೇಷ. ಮಹಿಳೆಯರ ಮರಣ ಸಂಖ್ಯೆಯು ಪುರುಷರಿಗಿಂತ ಕಡಿಮೆಯಾದುದರಿಂದ 60 ವರ್ಷಕ್ಕೆ ಮೇಲ್ಪಟ್ಟವರಲ್ಲಿ ಮಹಿಳೆಯರ ಪ್ರಮಾಣವು ಹೆಚ್ಚು ಎಂಬುದು ಸ್ವಾಭಾವಿಕವಾಗಿದೆ. ಆದ್ದರಿಂದ ವಾರ್ಧಕ್ಯದಲ್ಲಿ ಬಾಧಿಸುವ ಟೈಪ್- 2 ಮಧುಮೇಹ ರೋಗಿಗಳಲ್ಲಿ ಮಹಿಳೆಯರೇ ಅಧಿಕ ಎಂಬುದರಲ್ಲಿ ಆಶ್ಚರ್ಯವಿಲ್ಲ.

ಹೀಗೆ ಮಹಿಳೆಯಿಂದ ಆಕರ್ಷಿತವಾಗಿರುವ ಈ ರೋಗದ ಗಂಭೀರತೆಯ ಬಗ್ಗೆ ಅವುಗಳನ್ನು ತಡೆಯುವ ವಿಧಾನದ ಬಗ್ಗೆ ನಾವು ಗಮನಹರಿಸುತ್ತಿಲ್ಲ. ಸ್ತ್ರೀ ಮನೆಯ ಮುಖ್ಯ ಸ್ತಂಭ. ಕುಟುಂಬದ ಎಲ್ಲಾ ಸದಸ್ಯರ ಬೇಕು ಬೇಡಗಳನ್ನು ಅವರ ಎಲ್ಲಾ ಸ್ಥಿತಿಗಳಲ್ಲೂ ಅರಿತು ಉಪಚರಿಸು ವವಳು ಅವಳೇ. ಮನೆಯ ಸಂಪೂರ್ಣ ಜವಾಬ್ದಾರಿಯನ್ನು ನಿಭಾಯಿಸುತ್ತಿರುವ ಮನೆಯಾಕೆಗೆ ಮಧುಮೇಹ ರೋಗ ಕಾಡಿ, ಅದರ ನಿಯಂತ್ರಣದ ಬಗ್ಗೆ ಅರಿವಿಲ್ಲದೆ, ಸೂಕ್ತ ಚಿಕಿತ್ಸೆ ದೊರೆಯದೆ, ಕೊನೆಗೆ ಮನೆ ಮಂದಿ ಆರ್ಥಿಕ ಹಾಗೂ ಮಾನಸಿಕ ನಷ್ಟವನ್ನು ಜೀವನ ಪರ್ಯಂತ ಅನುಭವಿಸುತ್ತಾರೆ. ನಮ್ಮಲ್ಲಿ ಹೆಚ್ಚಿನ ಮಹಿಳೆ ಯರು ತಮ್ಮ ಅಸಡ್ಡೆ, ಆಲಸ್ಯ, ಅಜ್ಞಾನ ದಿಂದಾಗಿ ಇಂತಹ ರೋಗಗಳನ್ನು ಕೈ ಬೀಸಿ ಕರೆಯುತ್ತಾರೆ.

ಬೊಜ್ಜು ದೇಹ:

ಮಧುಮೇಹ ಮತ್ತು ಬೊಜ್ಜು ದೇಹವು ಅವಳಿಗಳೆಂದು ಹೇಳಲಾಗುತ್ತದೆ. ಮಹಿಳೆ ಯರಿಗೆ ಹೆಚ್ಚಾಗಿ ಕೊಬ್ಬಿನ ಕಾರಣದಿಂದ ಈ ರೋಗ ಬರುತ್ತದೆ. ಬೊಜ್ಜು ದೇಹಿಗಳಾದ ಪುರುಷರಲ್ಲಿ ಮಧುಮೇಹ ಸಾಧ್ಯತೆ ನಾಲ್ಕು ಪಟ್ಟಾದರೆ ಮಹಿಳೆಯರಲ್ಲಿ 15 ಪಟ್ಟು ಅಧಿಕವಾಗಿದೆ.
ಮಹಿಳೆಯರ ಜೀವನ ಶೈಲಿಯ ಬಗ್ಗೆ ಅಧ್ಯಯನದಿಂದ ತಿಳಿಯುವುದೇ ನೆಂದರೆ ಮಹಿಳೆಯರಲ್ಲಿ ವ್ಯಾಯಾಮ ಕಡಿಮೆ. ಅಲ್ಲದೆ ಗರ್ಭಧಾರಣೆ, ಹೆರಿಗೆ ಮೊದಲಾದ ಸಂದರ್ಭಗಳಲ್ಲಿ ಬಹಳ ಕಾಲವನ್ನು ವಿಶ್ರಾಂತಿ ಪಡೆದುಕೊಳ್ಳುತ್ತಾ ಗರ್ಭಿಣಿಯಾಗಿರುವಾಗ ವೈದ್ಯಕೀಯ ರಂಗವು ಸೂಚಿಸುವುದಕ್ಕಿಂತ ಅಧಿಕ ತೂಕ ಪಡೆದುಕೊಳ್ಳುತ್ತಾರೆ. ಆರ್ತವ ನಿಂತ ಬಳಿಕ ಕಡಿಮೆ ಪಕ್ಷ ವರ್ಷಕ್ಕೆ ಅರ್ಧ ಕಿಲೋ ತೂಕ ಹೆಚ್ಚುತ್ತಲೇ ಹೋಗುತ್ತಾರೆ. ದೇಹದಲ್ಲಿ ಕೊಬ್ಬು ಹೆಚ್ಚಿ ಹೊಟ್ಟೆ ಬರುವುದನ್ನು ಕಾಣಬಹುದು. ಇದು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ.

ಹೃದಯದ ತೊಂದರೆಗಳು:

ರಕ್ತದಲ್ಲಿ ಸಕ್ಕರೆ ಪ್ರಮಾಣದ ಹೆಚ್ಚಳವು ಹೃದಯಾಘಾತದ ಸಾಧ್ಯತೆಯನ್ನು ಹೆಚ್ಚಿಸು ತ್ತದೆ. ಮಧುಮೇಹ ರೋಗಿಯೆಂದು ಗುರುತಿಸಲ್ಪಡದ ‘ಬೋರ್ಡರ್ ಲೈನ್’ ಶುಗರ್ ಲೆವಲ್‍ನಲ್ಲಿದ್ದ ರೋಗಿಗಳಿಗೂ ಹೃದಯದ ಕಾಯಿಲೆಗಳು ಕಾಣಿಸಿಕೊಳ್ಳು ವುದಿದೆ. ಅವರಿಗೆ ಮಧುಮೇಹವಿರುವುದು ತಿಳಿದಿರುವುದಿಲ್ಲ. ಹೃದಯಕ್ಕೆ ತೊಂದರೆ ಬಾಧಿಸಿದ ಬಳಿಕವೇ ಆಕೆ ಮಧುಮೇಹಿ ಯಾಗಿದ್ದಳು ಎಂದು ತಿಳಿದು ಬರುತ್ತದೆ. ಇಂತಹ ಘಟನೆಗಳು ಮಹಿಳೆಯರಲ್ಲೇ ಹೆಚ್ಚಾಗಿ ನಡೆಯುತ್ತದೆ. ಕಾಲ ಕಾಲಕ್ಕೆ ಸೂಕ್ತ ವೈದ್ಯಕೀಯ ತಪಾಸಣೆ ನಡೆಸಿ, ಅಗತ್ಯ ಬಿದ್ದರೆ ಮುನ್ನೆಚ್ಚರಿಕಾ ಕ್ರಮ ಗಳನ್ನು ತೆಗೆದುಕೊಳ್ಳುವ ಸ್ವಭಾವ ಮಹಿಳೆ ಯರಲ್ಲಿ ಇಲ್ಲವಲ್ಲವೇ?

ಮಾನಸಿಕ ಖಿನ್ನತೆ:

ಪುರುಷ ಮಧುಮೇಹಿ ರೋಗಿಗಳಲ್ಲಿ ಮಾನಸಿಕ ಖಿನ್ನತೆ ಹದಿನೆಂಟು ಶೇಕಡಾ ಕಂಡು ಬರುವಾಗ ಮಹಿಳೆಯರಲ್ಲಿ ಅದು 28% ವಿರುತ್ತದೆ. ಈ ರೋಗವು ಮನುಷ್ಯನ ಜೀವನ ಶೈಲಿಯನ್ನೇ ಅಡಿಮೇಲುಗೊಳಿಸು ತ್ತದೆ. ಹಸಿವಿಲ್ಲದಿರುವುದು, ನಿದ್ರಾಹೀನತೆ, ಕೆಲಸದಲ್ಲಿ ನಿರಾಸಕ್ತಿ, ಹೆಚ್ಚೇಕೆ ಇತರ ರೊಂದಿಗಿನ ದೈನಂದಿನ ವ್ಯವಹಾರದಲ್ಲೇ ಇದರ ಪರಿಣಾಮ ಗೋಚರಿಸುತ್ತದೆ. ಮಧುಮೇಹಿಗಳಲ್ಲಿರುವ ಮಾನಸಿಕ ಖಿನ್ನತೆಯು ಮಧುಮೇಹ ರೋಗವನ್ನು ನಿಯಂತ್ರಿಸುವ ಸಾಧ್ಯತೆಯನ್ನೇ ಇಲ್ಲ ವಾಗಿಸುತ್ತದೆ ಎಂಬುದು ಈ ಎರಡೂ ರೋಗಗಳು ಒಟ್ಟಾಗಿ ಸೇರಿಕೊಳ್ಳುವುದರ ದುರಂತ.

ಮಧುಮೇಹ ಮತ್ತು ಲೈಂಗಿಕತೆ:

ಸ್ತ್ರೀ ಮತ್ತು ಪುರುಷರಲ್ಲಿ ಮಧು ಮೇಹವು ಸಂತಾನೋತ್ಪತ್ತಿಯ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಪುರುಷರಲ್ಲಿ ವೀರ್ಯಾಣುಗಳ ನಷ್ಟ ಹಾಗೂ ಆಸಕ್ತಿ ಕಡಿಮೆಯಾಗುತ್ತದೆ. ಪುರುಷರಲ್ಲಿ ಇದು ಯಾವ ರೀತಿಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂಬ ಬಗ್ಗೆ ಆಳವಾದ ಅಧ್ಯಯನ, ಚರ್ಚೆಗಳು ನಡೆಯುತ್ತಿದ್ದರೂ, ಸ್ತ್ರೀಯರ ಲೈಂಗಿಕತೆಯ ಮೇಲೆ ಈ ರೋಗ ಯಾವ ಪ್ರಭಾವ ಬೀರಿದೆ ಎಂಬುದರ ಬಗ್ಗೆ ಚಿಂತಿಸುವವರು ಕಡಿಮೆ. ಪ್ರಾಯಪೂರ್ತಿಯಾದಂದಿನಿಂದ, ಋತು ಚಕ್ರ ನಿಲ್ಲುವವರೆಗೂ ಅದು ಮಹಿಳೆಯರಿಗೆ ಹಲವಾರು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಮಧುಮೇಹದಿಂದ ಮಿಲನದಲ್ಲಿ ನೋವು, ನಿರಾಸಕ್ತಿ, ಆರ್ತವದಲ್ಲಿ ಏರುಪೇರು, ಆರ್ತವ ನಿಲ್ಲುವುದು, ಸಂತಾನೋತ್ಪತ್ತಿ ಕಡಿಮೆಯಾಗುವುದು, ಆರ್ತವದ ಸಂದರ್ಭದಲ್ಲಿ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚುವುದು… ಹೀಗೆ ಹಲವಾರು ತೊಂದರೆ ಗಳು ಕಾಣಿಸಿಕೊಳ್ಳುತ್ತದೆ. ಮೂತ್ರದ ಸೋಂಕಿನ ಸಾಧ್ಯತೆ ರೋಗವಿರುವ ಸ್ತ್ರೀಯ ರಲ್ಲಿ ರೋಗವಿಲ್ಲದ ಸ್ತ್ರೀಯರಿಗಿಂತ 50% ದಿಂದ 200% ಹೆಚ್ಚಿರುತ್ತದೆ.

ಸಕ್ಕರೆ ಕಾಯಿಲೆ ಮತ್ತು ಗರ್ಭಧಾರಣೆ:

ಗರ್ಭಿಣಿಯರಲ್ಲಿ ಮಧುಮೇಹವು ಬಹಳ ಕ್ಲಿಷ್ಟಕರವಾದ ಸಮಸ್ಯೆಯನ್ನುಂಟು ಮಾಡುತ್ತದೆ. ಪ್ರಸೂತಿ ತಜ್ಞ ಹಾಗೂ ಮಧುಮೇಹ ತಜ್ಞರ ಮೇಲ್ನೋಟವು ಇದಕ್ಕೆ ಅಗತ್ಯವಿದೆ. ಗರ್ಭಿಣಿಯರಲ್ಲಿ ಮುಖ್ಯವಾಗಿ ಎರಡು ವಿಧದ ಮಧುಮೇಹ ರೋಗಿಗಳಿರುತ್ತಾರೆ. ಮಹಿಳೆ ಸಕ್ಕರೆ ಕಾಯಿಲೆಯಿರುವ ಗರ್ಭಿಣಿಯಾಗುವುದು. ಗರ್ಭಧಾರಣೆಯ ಬಳಿಕ ಸಕ್ಕರೆ ಕಾಯಿಲೆ ಗೋಚರಿಸುವ ಗರ್ಭಿಣಿಯರು ಇದನ್ನು ಗರ್ಭಕಾಲದ ಮಧುಮೇಹ ಎಂದು ಕರೆಯಲಾಗುತ್ತದೆ. ಬೊಜ್ಜು, ವಂಶ ಪಾರಂಪರ್ಯ, ಅತಿಯಾದ ರಕ್ತದೊತ್ತಡ, ಮೊದಲ ಹೆರಿಗೆಯಲ್ಲಿ ದೊಡ್ಡ ಗಾತ್ರದ ಮಗುವಿನ ಜನನ, 35 ವರ್ಷದ ನಂತರದ ಗರ್ಭಧಾರಣೆ ಇತ್ಯಾದಿ ಕಾರಣಗಳು ಗರ್ಭಕಾಲದ ಮಧುಮೇಹಕ್ಕೆ ಕಾರಣವಾಗುತ್ತದೆ. ಹೀಗೆ ರೋಗ ಸಾಧ್ಯತೆಯಿರುವವರು ರಕ್ತ ಪರೀಕ್ಷೆ ಮಾಡಿ ರೋಗವಿದೆಯಾ ಎಂದು ಪರೀ ಕ್ಷಿಸುತ್ತಿರಬೇಕು. ರೋಗವನ್ನು ನಿಯಂತ್ರಿಸ ದಿದ್ದರೆ ತಾಯಿ-ಮಗುವಿಗೆ ಅಪಾಯ ವುಂಟಾಗುತ್ತದೆ. ಮೊದಲನೇ ವಿಭಾಗ ದವರು ಗರ್ಭಧಾರಣೆಗಿಂತ ಮೊದಲೇ ಕಾಯಿಲೆಯನ್ನು ನಿಯಂತ್ರಿಸಬೇಕು. ಮಗುವಿನ ಬೆಳವಣಿಗೆಯನ್ನು ಅನು ಸರಿಸಿ ಇನ್ಸುಲಿನ್‍ನ ಅಳತೆ ಹೆಚ್ಚಿಸಿ ನಿಯಂತ್ರಿಸಬೇಕು. ಗರ್ಭಿಣಿಯರು ಮೊದಲೇ ಮಾನಸಿಕ ಸಂಘರ್ಷದಲ್ಲಿರು ವುದು ಮಧುಮೇಹವನ್ನು ಹೆಚ್ಚಿಸುವು ದರಿಂದ ಹೆಚ್ಚು ಜಾಗ್ರತೆ ವಹಿಸಬೇಕು. ಸಕ್ಕರೆಯ ನಿಯಂತ್ರಣಕ್ಕೆ ಶಿಸ್ತುಬದ್ಧ ಕ್ಯಾಲೋರಿ ಕಡಿಮೆಯಿರುವ ಸವಿೂಕೃತ ಆಹಾರ ಅಗತ್ಯ. ಗರ್ಭಕಾಲದಲ್ಲಿ ಮಧು ಮೇಹ ಗೋಚರಿಸಿದವರಲ್ಲಿ ಅದು ಪ್ರಸವಾನಂತರ ಮುಂದುವರಿಯ ಬಹುದು ಅಥವಾ ನಂತರದ ದಿನಗಳಲ್ಲಿ ಪುನಃ ಕಾಣಿಸಿಕೊಳ್ಳುವುದಿದೆ. ಆದ್ದರಿಂದ ಆಹಾರದಲ್ಲಿ ಶಿಸ್ತನ್ನು ರೂಢಿಸಿ ಕೊಳ್ಳಬೇಕು.

ಮಹಿಳೆಯರು ಮತ್ತು ಮಧುಮೇಹ ಚಿಕಿತ್ಸೆ:

ಪುರುಷರಿಗೆ ಹೋಲಿಸಿದರೆ ಮಹಿಳೆ ಯರಿಗೆ ಚಿಕಿತ್ಸೆ ಬೇಗನೇ ಲಭಿಸುವು ದಿಲ್ಲ. ಗಂಡ ಹಾಗೂ ಮಕ್ಕಳ ನಿಬಿಡತೆಯಿಂದಾಗಿ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ. ಮಾತ್ರ ವಲ್ಲದೆ ಕುಟುಂಬದ ನೂರಾರು ಜವಾ ಬ್ದಾರಿಯ ನಡುವೆ ಆಕೆ ಸ್ವಂತ ರೋಗಕ್ಕೆ ಚಿಕಿತ್ಸೆ ಮಾಡುವುದನ್ನು ಮರೆತು ಬಿಡುತ್ತಾಳೆ.
ಕುಟುಂಬದ ಹಿರಿಯರನ್ನು, ಮಕ್ಕಳನ್ನು ಮತ್ತು ಗಂಡನನ್ನು ಉಪಚರಿಸುವ, ಅವರ ಅಗತ್ಯಗಳನ್ನು ಪೂರ್ತಿಗೊಳಿಸುವ ಗಡಿ ಬಿಡಿಯಲ್ಲಿರುತ್ತಾಳೆ. ಮಧುಮೇಹಕ್ಕೆ ಅಗತ್ಯ ವಿರುವ ಆಹಾರ ನಿಯಂತ್ರಣ ಹಾಗೂ ಔಷಧ ಸೇವನೆಯ ಬಗ್ಗೆ ಗಮನ ಹರಿಸುವುದಿಲ್ಲ. ಆಹಾರ ನಿಯಂತ್ರಣ ಮತ್ತು ವ್ಯಾಯಾಮ ಸೌಂದರ್ಯ ರಕ್ಷಣೆ ಗಾಗಿ ಮಾತ್ರ, ಅದು ಆರೋಗ್ಯ ಸಂರಕ್ಷಣೆ ಗಲ್ಲ ಎಂಬ ಭಾವನೆ ವ್ಯಾಪಕವಾಗಿದೆ. ಆದ್ದರಿಂದ ವ್ಯಾಯಾಮ ಮಾಡುವ ಗೋಜಿಗೆ ಹೋಗುವುದಿಲ್ಲ. ಕೆಲವು ಸ್ತ್ರೀಯರು ಹಣವನ್ನು ತಮಗಾಗಿ ವೈದ್ಯರಲ್ಲಿ ಖರ್ಚು ಮಾಡಲು ಇಷ್ಟಪಡುವುದಿಲ್ಲ. ತಮ್ಮ ಮಕ್ಕಳಿಗಾಗಿ ಎಲ್ಲವನ್ನೂ ವೈದ್ಯರಿಗೆ ನೀಡಲು ಸಿದ್ಧರಾಗುತ್ತಾರೆ. ನಮ್ಮ ಸಮಾಜ ದಲ್ಲಿ ಮಹಿಳೆ ಕುಟುಂಬದ ಕೇಂದ್ರ ಬಿಂದುವಾಗಿದ್ದಾಳೆ ಅವಳು ಕುಟುಂಬದ ಎಲ್ಲ ಸದಸ್ಯರಿಗಾಗಿ ಬದುಕುತ್ತಾಳೆ. ತಾವು ನೀಡಿದ್ದೆಲ್ಲ ಅವಳಿಗೆ ಮರಳಿ ಸಿಗುವುದಿಲ್ಲ. ಮಾತ್ರವಲ್ಲ, ತಮ್ಮದೇ ಅವಶ್ಯಕತೆಯನ್ನು ಪೂರ್ತಿಗೊಳಿಸಲು ಆಕೆಗೆ ಸಮಯ ಸಿಗುವುದಿಲ್ಲ ಎಂಬುದು ವಾಸ್ತವವಾಗಿದೆ.

ಗರ್ಭಿಣಿಯರಲ್ಲಿ ಮಧುಮೇಹ ವಿದೆಯಾ? ಎಂಬುದನ್ನು ಪರೀ ಕ್ಷಿಸುವುದನ್ನು ತಾಯಿ-ಮಗು ಆರೋಗ್ಯ ಸಂರಕ್ಷಣೆಯ ಭಾಗವಾಗಿ ಸರ್ಕಾರ ಜಾರಿಗೆ ತರಬೇಕು. ಮಧುಮೇಹವಿದೆಯೆಂದು ತಿಳಿದರೆ ಜೀವನಶೈಲಿ ಬದಲಾಯಿಸಲು ಅಗತ್ಯ ಚಿಕಿತ್ಸೆ ನೀಡಲು ಸಮಾಜ ಮುಂದಾಗಬೇಕು. ಗರ್ಭಿಣಿಯರಿಂದ ಆರಂಭಿಸುವುದರಿಂದ ಇದು ಕುಟುಂಬ ಮತ್ತು ಸಮೂಹದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.

ಮಹಿಳೆಯರಿಗೆ ರೋಗ ನಿಯಂತ್ರಣದ ಬಗ್ಗೆ ಮಾರ್ಗದರ್ಶನ ನೀಡುವ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಇದರಿಂದ ಮಹಿಳೆಯರಲ್ಲಿ ಜಾಗೃತಿ ಮೂಡಿಸ ಬಹುದು. ಗ್ರಾಮ ಪ್ರದೇಶ ಗಳನ್ನು ವಿಶೇಷ ಗಮನದಲ್ಲಿಡಬೇಕು. ಪ್ರತಿ ಪ್ರದೇಶಗಳಲ್ಲೂ ತರಬೇತಿ ಪಡೆದ ದಾದಿಯರನ್ನು ನೇಮಿಸಿ ಮಹಿಳೆಯರಿಗೆ ನಿರಂತರ ಎಚ್ಚರಿಕೆ ಹಾಗೂ ಮಾಹಿತಿ ಯನ್ನು ನೀಡುವ ವ್ಯವಸ್ಥೆ ಮಾಡ ಬೇಕು. ದೇಹದ ಅಮೂಲ್ಯ ಅಂಗ ಗಳನ್ನು ಬಲಿ ತೆಗೆದುಕೊಳ್ಳುವ ಸಾಮಥ್ರ್ಯ ವಿರುವ ಈ ರೋಗದಿಂದ ಎಲ್ಲರೂ ರಕ್ಷಣೆ ಹೊಂದಬೇಕು. ಆದ್ದರಿಂದ ಮಹಿಳೆಯರು ತಮ್ಮ ಆರೋಗ್ಯ ಹಾಗೂ ಜೀವನ ಶೈಲಿಯ ಬಗ್ಗೆ ಹೆಚ್ಚು ಕಾಳಜಿ ತೋರಿಸಬೇಕು. ಏಕೆಂದರೆ ಮಹಿಳೆಯರ ಆರೋಗ್ಯವೇ ಕುಟುಂಬದ ಸಂಪತ್ತು.

Leave a Reply