ನವದೆಹಲಿ: ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಜೈನಮುನಿ ತರುಣ್ ಸಾಗರ್ ಇಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ವಿಧಿವಶರಾಗಿದ್ದಾರೆ. ಅವರಿಗೆ 51 ವರ್ಷವಾಗಿತ್ತು. ನವದೆಹಲಿಯ ಕೃಷ್ಣ ನಗರದ ಪ್ರದೇಶದಲ್ಲಿರುವ ರಾಧಾಪುರಿ ಜೈನ ಆಶ್ರಮದಲ್ಲಿಯೇ ತರುಣ್ ಸಾಗರ್ ಸುಮಾರು ಮೂರು ಗಂಟೆಗೆ ಕೊನೆಯುಸಿರೆಳೆದರು.

ತರುಣ್ ಸಾಗರ್ ಅವರು ಜಾಂಡಿಸ್ ಖಾಯಿಲೆಯಿಂದ ಬಳಲುತ್ತಿದ್ದರು. ಸುಮಾರು 20 ದಿನಗಳ ಹಿಂದೆಯೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಅವರ ಆರೋಗ್ಯ ಸುಧಾರಿಸಲಿಲ್ಲ. ಈ ಹಿನ್ನೆಯಲ್ಲಿ ಮದ್ದು ಸೇವಿಸುವುದನ್ನು ನಿಲ್ಲಿಸಿದ್ದ ಅವರು ಜೈನ ಮಂದಿರಕ್ಕೆ ತಮ್ಮನ್ನು ಕರೆದೊಯ್ಯುವಂತೆ ಒತ್ತಾಯಿಸಿದ್ದ ಅವರನ್ನು ಜೈನ ಮಂದಿರಕ್ಕೆ ಕರೆದುಕೊಂಡು ಬರಲಾಗಿತ್ತು.

1967 ರ ಜೂನ್ 26ರಂದು ಮಧ್ಯ ಪ್ರದೇಶದ ದಾಹೋಹ್ ಜಿಲ್ಲೆಯಲ್ಲಿ ಜನಿಸಿದ ಪವನ್ ಕುಮಾರ್ ಜೈನ್ 1981 ರಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದರು. ತಮ್ಮ ಭಾಷಣಗಳ ಮೂಲಕವೇ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು. ಅವರ ಅಂತ್ಯ ಸಂಸ್ಕಾರವನ್ನು ಉತ್ತರ ಪ್ರದೇಶದ ಮುರುದ್ ನಗರದ ತರುಣ್ ಸಾಗರಮ್ ನಲ್ಲಿ ನಡೆಸಲಾಗುತ್ತದೆ.

ಮುನಿ ತರುಣ್ ಸಾಗರ್ ಜಿ ಮಹಾರಾಜ್ ಅವರ ಅಕಾಲಿಕ ಮರಣದಿಂದ ತೀವ್ರವಾಗಿ ದುಃಖವಾಗಿದೆ. ಅವರ ಆದರ್ಶಗಳು, ಸಹಾನುಭೂತಿ ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ನಾವು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ತರುಣ್ ಸಾಗರ್ ನಿಧನದ ಬಗ್ಗೆ ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ದುಃಖ ವ್ಯಕ್ತಪಡಿಸಿದ್ದು, ಜೈನ ಸನ್ಯಾಸಿಯವರು ನಮಗೆ ಸ್ಫೂರ್ತಿಯಾಗಿದ್ದು ಅವರ ಪಾದಗಳಿಗೆ ಶ್ರದ್ದಾಂಜಲಿ ಅರ್ಪಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

Leave a Reply